ನಾಸಿರ್ - ಉದ್ - ದೀನ್ ಕಬಾಚ
	12ನೆಯ ಶತಮಾನದ ಅಂತ್ಯದಲ್ಲಿ ಭಾರತದ ಮೇಲೆ ದಂಡಯಾತ್ರೆ ಮಾಡಿದ ಮುಹಮ್ಮದ್ ಘೋರಿಯ ಗುಲಾಮನಾಗಿದ್ದವ. ಕ್ರಮೇಣ ಮೇಲೇರಿದ. ಮಹಮ್ಮದ್ ಘೋರಿ ಇವನನ್ನು 1205ರಲ್ಲಿ ಮುಲ್ತಾನ್ ಮತ್ತು ಉಚ್‍ಗಳ ರಾಜ್ಯಪಾಲನಾಗಿ ನೇಮಿಸಿದ. 1206ರಲ್ಲಿ ಘೋರಿ ನಿಧನನಾದಾಗ ದೆಹಲಿಯಲ್ಲಿ ಘೋರಿಯ ಪರವಾಗಿ ಆಡಳಿತ ನಡೆಸುತ್ತಿದ್ದ ಕುತ್ಬ್-ಉದ್-ದೀನ್ ಐಬಕ್ ಸುಲ್ತಾನನೆಂದು ಘೋಷಿಸಿಕೊಂಡ. ಕಬಾಚನ ಅಧಿಕಾರ ಮುಂದುವರಿಯಿತು. ಅವನು ಕುತ್ಬ್-ಉದ್-ದೀನನ ತಂಗಿಯನ್ನು ಮದುವೆಯಾಗಿದ್ದ ಘೋರಿ ಭಾರತದಲ್ಲಿ ಗೆದ್ದ ಪ್ರದೇಶಗಳಿಗೆ ಐಬಕನನ್ನು ಉತ್ತರಾಧಿಕಾರಿಯೆಂದು ಮಾನ್ಯಮಾಡಿದ. ಆಗ ಘಜ್ನಿಯಲ್ಲಿ ಪ್ರಾಂತ್ಯಾಧಿಕಾರಿಯಾಗಿದ್ದ ತಾಜ್-ಉದ್-ದೀನ್ ಯಿಲ್ದಿಜ್ó ಐಬಕನನ್ನು ಸುಲ್ತಾನನೆಂದು ಮಾನ್ಯಮಾಡದೆ ತಾನೇ ಘೋರಿ ಮುಹಮ್ಮದನ ಉತ್ತರಾಧಿಕಾರಿಯೆಂದು ಘೋಷಿಸಿಕೊಂಡು ಕಬಾಚನ ಪ್ರದೇಶಗಳ ಮೇಲೆ ದಾಳಿ ಮಾಡಿದ. ಕೊನೆಗೆ ಐಬಕ್ ಯಿಲ್ದಿಜóನನ್ನು ಭಾರತದ ಪ್ರದೇಶಗಳಿಂದ ಓಡಿಸಿದ. ಇದರಿಂದ ಕಬಾಚನ ಸ್ಥಾನ ತಾತ್ಕಾಲಿಕವಾಗಿ ಭದ್ರವಾಯಿತು. 1210ರಲ್ಲಿ ಕುತ್ಬ್-ಉದ್-ದೀನ್ ಐಬಕ್ ನಿಧನನಾದಾಗ ಪುನಃ ಕಬಾಚ ತೊಂದರೆಗೆ ಸಿಲುಕಿಕೊಂಡ. ಐಬಕನ ನಂತರ ಬಂದ ಆರಾಮ್ ಶಾಹ 1211ರಲ್ಲಿ ಪದಚ್ಯುತನಾದ. ತರುವಾಯ ಷಂಸುದ್ದೀನ್ ಇಲ್ತತ್‍ಮಿಷ್ ಸಿಂಹಾಸನವೇರಿದ.

	ಈ ನಡುವೆ ಕಬಾಚ ಸ್ವಾತಂತ್ರ್ಯ ಘೋಷಿಸಿಕೊಂಡ. ಯಿಲ್ದಿಜ್ó ಪಂಜಾಬಿನ ಮೇಲೆ ದಂಡೆತ್ತಿ ಬಂದು ಕವಾಚನಿಂದ ಲಾಹೋರನ್ನು ಕಿತ್ತುಕೊಂಡ. ಕೊನೆಗೆ ಇಲ್ತತ್‍ಮಿಷ್ ಯಿಲ್ದಿಜóನಮ್ಮ ಸೋಲಿಸಿದ (1216). ಕಬಾಚ ಮತ್ತೆ ಲಾಹೋರನ್ನು ಆಕ್ರಮಿಸಿಕೊಂಡ. ಆದರೆ 1217ರಲ್ಲಿ ಇಲ್ತತ್‍ಮಿಷ್ ಕಬಾಚನನ್ನು ಹೊರ ಹಾಕಿ ಲಾಹೋರನ್ನು ಮತ್ತು ಪಂಜಾಬಿನ ಸ್ವಲ್ಪ ಭಾಗವನ್ನು ವಶಪಡಿಸಿಕೊಂಡ. ಮಂಗೋಲರ ದಾಳಿಯಿಂದ ರಾಜ್ಯವನ್ನು ಕಳೆದುಕೊಂಡ ಮಧ್ಯ ಏಷ್ಯನ್ ರಾಜಕುಮಾರ ಜಲಾಲುದ್ದೀನ್ ಮಂಗ್‍ಬರ್ನಿ ಪಂಜಾಬಿಗೆ ನುಗ್ಗಿದ. ಅವನು ಕಬಾಚನ ರಾಜ್ಯಕ್ಕೆ ಭಾರಿ ನಷ್ಟ ಉಂಟುಮಾಡಿದ್ದಲ್ಲದೆ ಅವನಿಂದ ಹೇರಳ ಸಂಪತ್ತು ಕಸಿದುಕೊಂಡು 1224ರಲ್ಲಿ ಪರ್ಷಿಯಕ್ಕೆ ಹೋದ. ಮಂಗ್‍ಬರ್ನಿ ಬೆನ್ನಟ್ಟಿಬಂದ ಮಂಗೋಲ್ ಸೇನಾಧಿಕಾರಿಗಳೂ ಕಬಾಚನ ರಾಜ್ಯಕ್ಕೆ ಮುಳುವಾಗಿದ್ದರು. ಈ ಕಾರಣಗಳಿಂದ ದುರ್ಬಲನಾಗಿದ್ದ ಕಬಾಚನನ್ನು ನಿರ್ಮೂಲ ಮಾಡಲು ಅಲ್ತತ್‍ಮಿಷ್ ನಿರ್ಧರಿಸಿದ. ಅವನು 1225ರ ತರುವಾಯ ಕಬಾಚನ ವಿರುದ್ಧ ದಂಡೆತ್ತಿ ಹೋದ. ಕಬಾಚ ಶಕ್ತಿ ಮೀರಿ ಹೋರಾಡಿದನಾದರೂ ಅಲ್ತತ್‍ಮಿಷನ ವಿರುದ್ಧ ನಿಲ್ಲಲಾರದೆ ಸೋತು 1228ರಲ್ಲಿ ಪಲಾಯನ ಮಾಡಿದ. ಅವನು ಅಡಗಿದ್ದ ಪ್ರದೇಶವನ್ನು ಆಲ್ತತ್‍ಮಿಷನ ಸೇನೆ ಮುತ್ತಿದಾಗ ಕಬಾಚ ಸಿಂಧೂನದಿಯಲ್ಲಿ ಮುಳುಗಿ ಸತ್ತ. ಅವನು ಅಕಸ್ಮಾತ್ ಮುಳುಗಿ ಸತ್ತನೆಂದು ಕೆಲವು ಇತಿಹಾಸಕಾರರೂ ಆತ್ಮಹತ್ಯೆ ಮಾಡಿಕೊಂಡನೆಂದು ಇನ್ನು ಕೆಲವರೂ ಅಭಿಪ್ರಾಯಪಟ್ಟಿದ್ದಾರೆ.
(ಡಿ.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ